ಜೀವನದಲ್ಲಿ ಯಾವುದೇ ಕೆಲಸ ಪ್ರಾರಂಭಿಸಲು ತಡವಾಯಿತು ಎಂಬ ಕಲ್ಪನೆ ಸುಳ್ಳು. ಇದು ಮಂಗಳೂರಿನ ಮೊದಲ ಎಲೆಕ್ಟ್ರಿಕ್ ಆಟೋ ಚಾಲಕಿಯಾಗಿ ಗುರುತಿಸಿಕೊಂಡ ಧೀರೆ ವನಿತಾ ಸುರೇಶ್ ಕೆ ಅವರ ಮನದಾಳದ ಮಾತು. 41 ರ ಮಧ್ಯ ವಯಸ್ಸಿನಲ್ಲಿ ತನ್ನ ಕುಟುಂಬದ ಆರ್ಥಿಕ ಜವಾಬ್ದಾರಿಯಲ್ಲಿ ಹೆಗಲು ಕೊಡಲು ಪ್ರಾರಂಭಿಸಿದ ವನಿತಾ ಸುರೇಶ್ ಅವರ ಸಾಧನೆ. ಪತಿ ಸುರೇಶ್ ಅವರು ತನ್ನ ಕನಸುಗಳಿಗೆ ರೆಕ್ಕೆ ಮೂಡಿಸಿದರು ಎಂದಷ್ಟೇ ಅವರು ಹೇಳುತ್ತಾರೆ. ಸುಮಾರು ಎರಡು ತಿಂಗಳ ವೃತ್ತಿಯ ಅನುಭವದಿಂದ ಅವರ ಆತ್ಮವಿಶ್ವಾಸ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಕಾಲೇಜಿಗೆ ಹೋಗುವ ಇಬ್ಬರು ಮಕ್ಕಳ ವಿದ್ಯಾಭ್ಯಾಸ ತೊಡಕಿಲ್ಲದೆ ಸಾಗಿದೆ. ಮನೆ ಕೆಲಸದಲ್ಲಿ ಅವರು ಮತ್ತು ಪತಿ ಕೂಡ ಸಹಾಯ ಮಾಡುತ್ತಾರೆ. ಪತಿಯ ಸಹಾಯದಿಂದ ಈಗ ಸ್ವಂತ ಆಟೋ ಖರೀದಿಸಿ ನಿರಾಳ ರಾಗಿದ್ದಾರೆ.
ವೃತ್ತಿಯಲ್ಲಿ ಎದುರಾಗುವ ರಸ್ತೆ ಸಂಬಂಧಿಸಿದ ಸಮಸ್ಯೆಗಳಿಗೆ ಪುರುಷ ಆಟೋ ಚಾಲಕರು ಸಕಾಲಕ್ಕೆ ಸಹಾಯ ಮಾಡುತ್ತಾರೆ ಎಂಬುದು ವನಿತಾ ಅವರ ಅನುಭವ. ವನಿತಾ ತುಳು, ಕನ್ನಡ, ಹಿಂದಿ ಮತ್ತು ಮಲಯಾಳ ಸಂಭಾಷಿಸ ಬಲ್ಲರು. ಮಹಿಳಾ ಸಾರ್ವಜನಿಕರಂತು ಅವರ ತ್ರಿಚಕ್ರ ವಾಹನದಲ್ಲಿ ಸಂಚರಿಸಲು ಹೆಮ್ಮೆ ಪಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಇವರ ತವರೂರು. ತಾಯಿ ಮನೆ ಮತ್ತು ಮಾವನ ಮನೆಯಲ್ಲಿ ಇವರಿಗೆ ಸಾಕಷ್ಟು ಪ್ರೋತ್ಸಾಹ ಸಿಕ್ಕಿದೆ. ಎರಡು ಕುಟುಂಬಗಳಿಗೆ ವನಿತಾ ಆಭಾರಿಯಾಗಿದ್ದಾರೆ. ವನಿತಾ ಅವರು ತನ್ನ ಸಂಚಾರಿ ಉದ್ಯಮದ ಜೊತೆಗೆ ಅರೆಕಾಲಿಕ ಟೈಲರಿಂಗ್ ಕೂಡ ಮಾಡುತ್ತಾರೆ. ಬಿಡುವಿನ ಸಮಯದಲ್ಲಿ ಮತ್ತು ವಿಪರೀತ ಹವಾಮಾನದ ಸಂದರ್ಭಗಳಲ್ಲಿ ಅವರು ಉಪ ಉದ್ಯಮದಲ್ಲಿ ತೊಡಗಿಕೊಳ್ಳುತ್ತಾರೆ. ಸ್ವಾವಲಂಬನೆಯತ್ತ ಮುಖ ಮಾಡಿದ ಮಹಿಳೆಯರಿಗೆ ಆಟೋ ಚಾಲಕಿ ವನಿತಾ ಸ್ಪೂರ್ತಿಯಾಗಬಲ್ಲರು. ಇದು ಇಂದಿನ ಸಾಮಾಜಿಕ ಅವಶ್ಯಕತೆಯೂ ಆಗಿದೆ. ಅವರಿಗೆ ಹೆಚ್ಚಿನ ಯಶಸ್ಸು ಸಿಗಲಿ ಎಂದು ಸಾರ್ವಜನಿಕರ ಪರವಾಗಿ ಶುಭಾಕಾಂಕ್ಷೆಗಳು.
Comments (0)
Post Comment
Report Abuse
Be the first to comment using the form below.